ಎಲ್ಲಿಯದನೋ ಅದೆಲ್ಲಿಯದಕೋ ಹೆಣೆಯುವನು |
ಒಲ್ಲೆವೆನೆ ನೀವೇ ಕಿತ್ತಾಡಿಕೊಳಿರೆನುವನ್ ||
ಬೆಲ್ಲದಡುಗೆಯಲಿ ಹಿಡಿ ಮರುಳನೆರಚಿಸುವನು |
ಒಳ್ಳೆಯುಪಕಾರಿ ವಿಧಿ -- ಮಂಕುತಿಮ್ಮ ||
ಜನಕಜೆಯ ದರುಶನದಿನಾಯ್ತು ರಾವಣ ಚಪಲ |
ಕನಕಮೃಗದರುಶನದೆ ಜಾನಕಿಯ ಚಪಲ ||
ಜನವವನ ನಿಂದಿಪುದು, ಕನಿಕರಿಪುದಾಕೆಯಲಿ |
ಮನದ ಬಗೆಯರಿಯದದು - ಮಂಕುತಿಮ್ಮ ||
"ಜನಕಜೆ (ಸೀತೆ)ಯನ್ನು ನೋಡಿದ ರಾವಣನಿಗೆ, ಆಕೆಯನ್ನ ತನ್ನವಳನ್ನಾಗಿ ಪಡೆಯಬೇಕೆಂಬ ಮನಸ್ಸಿನ ಹಂಬಲ ಉಂಟಾಯಿತು. ಸೀತೆಗೆ ಚಿನ್ನದ ಜಿಂಕೆಯನ್ನು ನೋಡಿದಾಗ ಅದನ್ನು ತನ್ನದಾಗಿಸಿಕೊಳ್ಳಬೇಕೆಂಬ ಅದೇಬಗೆಯ ಮನಸ್ಸಿನ ಹಂಬಲ ಉಂಟಾಯಿತು. ಆದರೆ ಜನ ರಾವಣನನ್ನು ಕೆಟ್ಟವನನ್ನಾಗಿ ಬಿಂಬಿಸುತ್ತಾರೆ, ಸೀತೆಯಲ್ಲಿ ಕನಿಕರದ ಕಂಬನಿ ಮಿಡಿಯುತ್ತಾರೆ. ಸೀತೆಯಲ್ಲಿ ಉಂಟಾದ ಮನಸ್ಸಿನ ಹಂಬಲ ರಾವಣನಲ್ಲಿಯೂ ಮೂಡಿತ್ತು, ಹಂಬಲಿಸಿದ ವಸ್ತು ಬೇರೆಬೇರೆ ಇದ್ದರೂ ಅದರ ಮೂಲ ಉದ್ದೇಶ ಒಂದೇ. ಮನಸ್ಸಿನ ಬಗೆಯನ್ನು ಅರಿಯದೆ, ಎರಡು ಮನಸ್ಸಿನ ಹಂಬಲ ಒಂದೇ ಇದ್ದರೂ ಅದನ್ನರಿಯದ ಜನ ನಿಂದನೆ ಮತ್ತು ಕನಿಕರತೆಯನ್ನು ತೋರುತ್ತಾರೆ"
ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧಾನ್ಯವನುಉನ್ನು ತೊಂದೆ ನೀರು ಕುಡಿದು||
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು|
ಬಂದುದೀ ವೈಷಮ್ಯ? - ಮಂಕುತಿಮ್ಮ ||
ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ ಮಾಸಣಕೋ ಹೋಗೆಂದ ಕಡೆಗೋಡು |
ಪದ ಕುಸಿಯೆ ನೆಲವಿಹುದು - ಮಂಕುತಿಮ್ಮ ||
ಅದು ಬೇಕು ಇದು ಬೇಕು ಮತ್ತೊಂದು ಬೇಕೆಂದು |
ಬೆದಕುತಿರುವುದು ಲೋಕ ಸೋಗದಿರವನೆಳಸಿ ||
ಹೃದಯಗುಹೆಯಾ ಸುಖಧ್ಯಾನದೂಟೆಯೆ ಸಾಕ್ಷಿ |
ಮುದಗಳಮಿತದ ನಿಧಿಗೆ - ಮಂಕುತಿಮ್ಮ ||
ಆಶೆ ಮಂಥರೆ, ನರವಿವೇಚನೆಯೇ ಕೈಕೇಯಿ |
ಬೀಸೆ ಮನದುಸಿರು ಮತಿದೀಪವಲೆಯುವುದು ||
ವಾಸನೆಗಳನುಕೂಲ ಸತ್ಯತರ್ಕಕೆ ಶೂಲ |
ಶೋಷಿಸಾ ವಾಸನೆಯ - ಮಂಕುತಿಮ್ಮ ||
ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ |
ಸೋಮಶಂಕರನೆ ಭೈರವ ರುದ್ರನಂತೆ ||
ಹೈಮವತಿ ಶಿವೆ ತಾನೆ ಕಾಳಿ ಚಂಡಿಕೆಯಂತೆ |
ಪ್ರೇಮ ಘೋರಗಳೊಂದೆ ! -- ಮಂಕುತಿಮ್ಮ ||